Sunday, July 22, 2012

railu bandi

ಬೆಂಗಳೂರು-ಹುಬ್ಬಳ್ಳಿ, ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಚಲಿಸುವ ಪ್ಯಾಸೆಂಜರ್ ರೈಲು ಇವರ ನಿತ್ಯ ಒಡನಾಡಿ.ನಿತ್ಯ ಕೆಲಸಕ್ಕೆಂದು ಇದರಲ್ಲಿ ಪ್ರಯಾಣ ಬೆಳೆಸುವ ಇವರು ಈ ರೈಲಿನ ಬಂಡಿಯಲ್ಲಿ ಕುಳಿತು ಬದುಕಿನ ಭವಿಷ್ಯದ ಬಗ್ಗೆ ಚಿಂತಿಸುತ್ತಾರೆ.ಹಳ್ಳಿ ಹೈದರಾದರೂ ಹುಬ್ಬಳ್ಳಿ ಸಂಪರ್ಕದಿಂದ ಆಧುನಿಕತೆಯನ್ನು ಅಪ್ಪಿಕೊಂಡಿದ್ದಾರೆ.ಪ್ರಯಾಣಿಸುವ ಕೆಲವೇ ಕೆಲ ಅವಯಲ್ಲೂ ಹಾಸ್ಯ ಚಟಾಕೆಗಳನ್ನು ಹಾರಿಸುತ್ತಾ, ಮನರಂಜನೆ ಮಾಡುತ್ತಾ ಸಾಗುವ ಇವರಿಗೆ ಹುಬ್ಬಳ್ಳಿ ಬರೀ ರೇಲ್ವೇ ಜಂಕ್ಷನ್ ಅಲ್ಲ ಜಾಬ್ ಜಂಕ್ಷನ್ ಕೂಡಾ ಹೌದು.

ರೈಲು ಬಂಡಿಯೇ ಇವರ ಬದುಕಿನ ಕೊಂಡಿ

ರೈಲ್ವೇ (ಉಗಿ ಬಂಡಿ) ಯ ಅಂದಿನ ೨ ಗಂಟೆ ಪಯಣ ಪ್ರಸವ ವೇದನೆ ಎನಿಸಿದರೂ ಅಲ್ಲಿಯ ಅನುಭವ ಮಾತ್ರ  ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಎನ್ನುವ ಕವಿ ಡಿ.ವಿ. ಜಿ ಅವರನ್ನು ನೆನಪಿಸಿತು.
ಇದು ಒಂದು ದಿನದ ಮಾತಲ್ಲ ಇವರಿಗೆಲ್ಲ ನಿತ್ಯದ ಗೋಳು ಅಲ್ಲಲ್ಲಾ ಬರಿ ಓಳು. ಅಷ್ಟೊತ್ತಿಗಾಗಲೇ ಪಕ್ಕದ ಜಂಟ ಲಮನ್(ನೋಡಲು) ಮೊಬೆ`ಲ್ ರಿಂಗುಣಿಸುತ್ತಿದ್ದಂತೆ ರಿಸೀವ್ ಮಾಡಿ ಹೇಳಲೇ ನಾ ಪಕ್ಕದ ಡಬ್ಯಾಗ ಅದೇನಿ ಎನ್ನುವ ಕರ್ಕಷ ಧ್ವನಿ. ಒಂದು ಕ್ಷಣ ಅವಕ್ಕಾದ ನಾನು ಎಲ್ಲಿ ಸಾಹೇಬ್ರ ನಿಮ್ಮ ಕೆಲ್ಸ್ ಅಂತ ಕೇಳಿದ್ದೇ ತಡ ಯಾಕ್ ಸಾಹೇಬ್ರ ಮನಿ ಕಟ್ಟಾಕ ಹತ್ತೀರೇನು? ನಾವು ಹದಿನೈದು ಜನ ಅದೇವ್ರಿ ಎನ್ನುವ ಪ್ರವರ ಆರಂಭಿಸಿದ.

ಮಾತಿಗಿಳಿದಾಗ ಹೇಳಿದ್ದಿಷ್ಟು, ಹೆಸರು ಮಂಜು, ಊರು ಸಂಶಿ, ಗೌಂಡಿ ಕೆಲಸ, ಈ ವೇಳೆಗಾಗಲೆ ಅವನೊಂದಿಗೆ ಸೇರಿಕೊಂಡವನು ಪರಮೇಶಿ, ಬಾರ್ ಬೆಂಡಿಂಗ್ ಕೆಲಸ ಕೈಯಲ್ಲಿ ಮಾತ್ರ ಬೆಲೆ ಬಾಳುವ ಮೊಬೈಲ್ ಹೀಗೆ ಅಲ್ಲಿ ಒಬ್ಬೊಬ್ಬರದ್ದೂ ಒಂದು ಕಥೆ. ನೋಡಿದ್ರ ಥೇಟ್  ಹಿರೋನ ಪೋಸು ಮಾಡ್ ಡ್ರೆಸ್.ಕೈಯಲ್ಲಿ ಊಟದ ಡಬ್ಬಿ. ಈ ಅನುಭವ ನಿಮಗೆ ಕಾಣಸಿಗುವುದು ಹುಬ್ಬಳ್ಳಿ-ಬೆಂಗಳೂರ ಪ್ಯಾಸಿಂಜರ್‌ನಲ್ಲಿ ಅದೂ ಬೆಳಗಿನ ಟ್ರೇನ್‌ಗೆ
ಸಂಸಾರ ಸಮೇತ ಈ ಟ್ರೇನ್ ಹತ್ತಬೇಕಿದ್ದರೆ ನಿಮ್ಮ ಕೈ-ಕಾಲು ಗಟ್ಟಿ ಇರಬೇಕು ಮೈಯಲ್ಲಿ ಶಕ್ತಿ ಇರಬೇಕು. ಕೆಟ್ಟ ವಾಸನೆ ತಡೆಯೋ ಮನಸಿರಬೇಕು. ತಪ್ಪು ತಿಳೀಬೇಡಿ, ಇದಕ್ಕೂ ಕಾರಣ ಇದೆ. ಬಸ್.ಗೆ ಹೋದರೆ ೨೪ ರೂ. ಇಲ್ಲಿ ಬರೀ ೪ ರೂ. ಇಷ್ಟು ಸಾಕಲ್ಲ ಎಲ್ಲರೂ ಟ್ರೇನೇ ವಾಸಿ ಅನ್ನೋದು ಯಾಕೆ ಅಂತಾ.

ಈ ನಡುವೆ ಟ್ರೇನ್ ನಿಂತದ್ದು ಕುಂದಗೋಳದಲ್ಲಿ ಅಲ್ಲೂ ಸಹ ಇದಕ್ಕಿಂತ ಭಿನ್ನ ಇಲ್ಲದ ವಾತಾವರಣ. ಊಟದ ಡಬ್ಬಿ   ಹಿಡಿದ, ಸಲಕಿ, ಗುದ್ದಲಿ, ಉಳಿ ಸೇರಿದಂತೆ ಬಡಿಗತನಕ್ಕೆ ಸೇರಿದ ಸಾಮಗ್ರಿಗಳ ಕೈಚೀಲ. ಬಂದವರೇ ನಿಮಗೆ ಸಿಗದ ಸೀಟು ಅವರಿಗೆ ರಿಜರ್ವ ಆಗಿರುತ್ತದೆ. ಏನಪಾ ದೋಸ್ತ ಇವತ್ತ ಎಲ್ಲೆ? ಎಂ.ಜಿ ರಸ್ತೇನೋ,ಉಗರಗೋಳ ಉಣಕಲ್ಲ, ಲಗೂನ ಬಂದ್ರ ಸುಜಾತಾ ಕಡೆಗೆ ಬಾ, ಬಾಳ ಛಲೋ ಐತಂತ ಬಸ್ಯಾ ಹೇಳ್ತಿದ್ದ ನಿನ್ನೆ ಹೋಗಿದ್ನಂತ. ಈ ಮಾತು ಕೇಳುತ್ತಿದ್ದಂತೆ ನಿಮಗೆ ಒಂದು ಕ್ಷಣ ಪಿಚ್ಚೆನಿಸಬಹುದು. ಎಷ್ಟು ಕೆಟ್ಟ ಮಾತು ಆಡ್ತಾರಲ್ಲ ಅಂತ ಆದರ ಅವ್ರು ಟಾಕೀಸ್, ಪಿಕ್ಚರ್ ಬಗ್ಗೆ ಹೇಳಿದ್ದು ಅನ್ನೋದು ಯಾರಿಗೂ ಗೊತ್ತಾಗೋದಿಲ್ಲ.
ಮಾತು ಮುಗಿಯುವ ವೇಳೆಗಾಗಲೆ ಅವರೆಲ್ಲ ಅವರವರ ತಾಣ ಬಂದಲ್ಲಿ ಇಳಿದು ಹೋಗಿದ್ದರು. ದೂರದ  ಚಹಾ ಅಂಗಡಿಯಲ್ಲಿ ಚಲ್ತಿಕಾ ನಾಮ್ ಗಾಡಿ ಹಾಡು ಜೋರಾಗಿ ಕೇಳಿ ಬರುತ್ತಿದ್ದರೆ ಅವರೆಲ್ಲ ಕೆಲಸ ನಡೆಯುವ ಸ್ಥಳ ತಲುಪಲು ಬಸ್‌ಗೆ ಜೋತು ಬಿದ್ದಿದ್ದರು. ಹಾಡು ಹಳೆಯದಾದರೇನು ಭಾವ ನವನವೀನ ಅವರೂ ಸಹ ನಮ್ಮಂತೆ ಹುಡುಗ/ಹುಡಿಗಿಯರೆ ಕೆಲಸ, ಉಡುಗೆ-ತೊಡಿಗೆ ಮಾತ್ರ ಬೇರೆ ಬೇರೆ.
 ಕೆಲಸಕ್ಕೆಂದು ಹುಬ್ಬಳ್ಳಿಗೆ ಹೊರಡಲು ದಿನ ಬೆಳಗ್ಗೆ ೮ ಗಂಟೆಗೆ ಸಂಶಿ ಸ್ಟೇಶನ್‌ಗೆ ಜಮಾಯಿಸುವ ಈ ಜನರ ಜತೆ ಪ್ರಯಾಣ ಮಾಡೋದೇ ಒಂದು  ವಿಶಿಷ್ಟ ಅನುಭವ. ರೈಲಿನಲ್ಲಿ ಅವರ ಹಾಸ್ಯಚಟಾಕೆಗಳು, ಕುಚೇಷ್ಟೆಗಳು ಒಂದೆಡೆಯಾದರೆ ಇನ್ನೊಂದೆಡೆ ಇವತ್ತು ಎಲ್ಲಿ ಕೆಲಸ ಹುಡುಕಬೇಕು. ಯಾರನ್ನು  ಹಿಡಿಯಬೇಕು  ಎಂಬ ಚಿಂತನೆಯಲ್ಲಿ ಚರ್ಚಿಸುತ್ತಿರುವವರು ಕಂಡುಬರ್ತಾರೆ. ಕಾಲಿಡಲು ಒಂದಿಂಚೂ ಜಾಗವಿಲ್ಲದಷ್ಟು ಜನ ಈ ರೈಲಿನಲ್ಲಿ ತುಂಬಿರುತ್ತಾರೆ.

  ಇದು ಬರೀ ಸಂಶಿ ಸ್ಟೇಶನ್‌ನಿಂದ ಹತ್ತುವವರ ಕಥೆ ಅಲ್ಲ. ಹಾವೇರಿ ಜಿಲ್ಲೆ ಕರ್ಜಗಿ ಸ್ಟೇಶನ್‌ನಿಂದ ಯಲುವಿಗಿ, ಗುಡಿಗೇರಿ, ಕುಂದಗೋಳ ಸ್ಟೇಶನ್‌ನಿಂದ ನಿತ್ಯ ಏನಿಲ್ಲವೆಂದರೂ ೧೨೦೦ ರಿಂದ ೧೪೦೦ ರವರೆಗೆ ಕಾರ್ಮಿಕರು ಕೆಲಸಕ್ಕೆ ಹುಬ್ಬಳ್ಳಿಗೆ ಬರ್ತಾರೆ. ಈ ರೈಲು ಅವರ ನಿತ್ಯ ಒಡನಾಡಿ.ಕೆಲವರು ೨ ಗಂಟೆ ಅವಯ ಪ್ರಯಾಣ ಮಾಡಿದರೆ ಇನ್ನು ಕೆಲವರು ಒಂದು ಗಂಟೆ ಪ್ರಯಾಣ ಮಾಡ್ತಾರೆ. ಈ ವೇಳೆ ಅವರ ಚಟುವಟಿಕೆಗಳು ನಿಜಕ್ಕೂ ಖುಶಿ ಕೊಡುತ್ತವೆ. ಯುವಕರಂತೂ ಆಧುನಿಕತೆ ಅಳವಡಿಸಿಕೊಂಡಿದ್ದಾರೆ. ಬಹುತೇಕರ ಕಡೆ ಮೊಬೆ`ಲ್ ಇದೆ. ಇದರಲ್ಲಿ ಚಲನಚಿತ್ರ ಹಾಡು ಹಾಕಿಸಿಕೊಂಡಿದ್ದಾರೆ. ತಮಗಿಷ್ಟವಾದ ಹಾಡು ಹಾಕಿಕೊಂಡು ಏರ್‌ಫೋನ್‌ನಲ್ಲಿ ಸಂಗೀತದ ಸವಿ ಉಣ್ಣುತ್ತಿದ್ದರೆ. ಇನ್ನು ಕೆಲವರು ಜೋರಾಗಿ ಹಾಡು ಹಾಕಿರ್ತಾರೆ. ಅಕ್ಕಪಕ್ಕದವರಿಗೆ ಕಿರಿಕಿರಿ ಉಂಟಾಗಿ ಯಾರಾದರೂ ಆಕ್ಷೇಪ ವ್ಯಕ್ತಪಡಿಸಿದರೆ ಅವರುದ್ದಕ್ಕೂ ಜಗಳ ತೆಗೆಯೋದು ಉಂಟು. ನನ್ನ ಮೊಬೈಲ್ ನನ್ನ ದುಡ್ಡು ನಿಮ್ಮಪ್ಪನ ಮನೀದ ಏನ್ ಹೊಕ್ಕೆತಿ ಅಂತಾ ದಬಾಯಿಸುವವರಿಗೇನು ಕೊರತೆ ಇಲ್ಲ. ಅದರಲ್ಲೇ ಕೆಲ  ಹಿರಿಯರು ರಾಜಕಾರಣದ ಬಗ್ಗೆ ಹರಟೆ ಹೊಡೆಯುತ್ತಿರುತ್ತಾರೆ. ನಮ್ಮದೇನು ಫೊಟೋ ತಗೀಬ್ಯಾಡ್ರಿ ಸಾಹೇಬರೆ ಮಳೆ ಇಲ್ಲ ಬೆಳೆ ಇಲ್ಲ. ದುಡಿಮೆಗಾಗಿ ಎಲ್ಲರೂ ಹುಬ್ಬಳ್ಳಿಗೆ ಹೊಂಟೇವ್ರಿ.ಈ ಸುದ್ದಿ ಒಯ್ದು ಹೊಸ ಮುಖ್ಯಮಂತ್ರಿ ಶೆಟ್ಟರ್ ಸಾಹೇಬ್‌ರಿಗೆ ಹೇಳ್ರಿ. ಪೇಪರನ್ಯಾಗ ಹಾಕ್ರಿ ಅಂತ ಹೇಳಿದಾಗ ಅವರ ರಾಜಕೀಯ ಅಪ್‌ಡೇಟ್‌ನ  ವಿಷಯ ಗೊತ್ತಾಯ್ತು.
 ಈ ರೆ`ಲಿನಲ್ಲಿ ಬರೀ ಕೂಲಿಕಾರ್ಮಿಕರೇ ಹತ್ತುವುದಿಲ್ಲ. ಕಾಲೇಜು ವಿದ್ಯಾರ್ಥಿಗಳು, ಸರಕಾರಿ ಮತ್ತು ಖಾಸಗಿ ನೌಕರರು ಪ್ರಯಾಣಿಸುತ್ತಾರೆ. ವಿದ್ಯಾರ್ಥಿಗಳದ್ದು ಡ್ರೆಸ್ ಮತ್ತು ಫ್ಯಾಶನ್ ಬಗ್ಗೆ ಹೊಸ ಹೊಸ ಮೊಬೆ`ಲ್ ಸೆಟ್‌ಗಳ ಬಗ್ಗೆ ಚರ್ಚೆಯಾದರೆ. ನೌಕರರು ಆದಷ್ಟು ನಿದ್ದೆ ಆಗಲಿ ಅಂತಾ ನಿದ್ರೆಯ ಮೊರೆ ಹೋಗ್ತಾರೆ.ಒಬ್ಬರ ಮಾತು ಇನ್ನೊಬ್ಬರಿಗೆ ಕೇಳಲಾಗದಷ್ಟು ಗೊಂದಲ, ಗೋಜಲು ಇದ್ದರೂ ಕೆಲವರು ಹಾಯಾಗಿ ಮಲಗುತ್ತಾರೆ .

ರೈಲೇ ಸೋವಿ

ಸಂಶಿಯಿಂದ ಹುಬ್ಬಳ್ಳಿಗೆ ಬಸ್‌ನಲ್ಲಿ ಪ್ರಯಾಣಿಸಿದರೆ ೨೪ ರೂ ಆದರೆ ರೆ`ಲಿನಲ್ಲಿ ಪ್ರಯಾಣಿಸಿದರೆ ಬರೀ ೪ ರೂ. ಇದು ಇವರ ಬಜೆಟ್‌ಗೆ ಅನುಕೂಲ.ಸ್ವಲ್ಪದರಲ್ಲಿ ರೈಲು  ಮಿಸ್ ಆದ್ರೆ ಅವತ್ತು ಕೆಲಸಕ್ಕೆ ರಜಾ. ರಜೆ ಇದ್ದ ದಿನ ರೈಲು ಪ್ರಯಾಣ  ಮಿಸ್ ಮಾಡ್ಕೊಂಡ ಇವರಿಗೆ ಅದೇನೋ ಕಳೆದುಕೊಂಡ ಅನುಭವ.
    ಹುಬ್ಬಳ್ಳಿಗೆಂದು ಕೆಲಸಕ್ಕೆ ಬರುವವರಲ್ಲಿ ಕುಂದಗೋಳ ಮತ್ತು ಸವಣೂರು ತಾಲೂಕಿನ ೬೮ಕ್ಕೂ ಹೆಚ್ಚು ಹಳ್ಳಿಗಳಿಂದ ಜನ ಬರ್ತಾರೆ. ಇವರಲ್ಲಿ ಬಹುತೇಕರು ಪಿಯುಸಿ ಅಥವಾ ಎಸ್‌ಎಸ್‌ಎಲ್‌ಸಿ ವರೆಗೆ ಓದಿದವರಾಗಿದ್ದಾರೆ. ಮನೆಯ ಸ್ಥಿತಿ ಇವರನ್ನು ಅನಿವಾರ್ಯವಾಗಿ ಕೆಲಸಕ್ಕೆ ತಳ್ಳಿದೆ. ಓದು ಅರ್ಧಕ್ಕೆ ಮೊಟಕುಗೊಳಿಸಿ ದುಡಿಮೆಗೆ ನಿಂತಿರುವ ಇವರು ಹುಬ್ಬಳ್ಳಿಯ ಸೆಳೆತಕ್ಕೆ ಒಳಗಾಗಿದ್ದಾರೆ. ಆಧುನಿಕತೆಯನ್ನು ಹಂತಹAತವಾಗಿ ಅಳವಡಿಸಿಕೊಂಡಿದ್ದಾರೆ. ಜೀನ್ಸ್ ಪ್ಯಾಂಟ್ ಶಾರ್ಟ್ ಶರ್ಟ್ ಸೇರಿದಂತೆ ಮಾಡ ಆಗಿ ಡ್ರೆಸ್ ಮಾಡುತ್ತಿದ್ದಾರೆ. ಗೌಂಡಿ(ಗಾರೆ)ಕೆಲಸವೋ, ಸೆಂಟ್ರಿಂಗ್(ಬಾರ್‌ಬೆಂಡಿಂಗ್)ಅಥವಾ ಪೇಂಟಿಂಗ್ ಕೆಲಸಕ್ಕೆಂದು ಹುಬ್ಬಳ್ಳಿಗೆ ಬರ್ತಾರೆ. ಪ್ರತಿ ಶನಿವಾರ ಇವರಿಗೆ ವೀಕ್‌ಆಫ್. ಅಂದು ಸಂಬಳ ಸಿಗುತ್ತದೆ. ಸಂಬಳ ಪಡೆದು ಒಂದು ಸಿನೆಮಾ ನೋಡುವ ಹವ್ಯಾಸ ಇವರದು.ಇನ್ನು ಕೆಲವರು ಕುಡಿತದಂತಹ ದುಶ್ಚಟಗಳಿಗೆ ಮೊರೆ ಹೋಗಿದ್ದಾರೆ. ಕೆಲಸ ಮುಗಿದ ಮೇಲೆ ಸಂಜೆ ಸ್ವಲ್ಪ ತೀರ್ಥ ಸೇವಿಸಿದರೇನೇ ಇವರ ಆತ್ಮ ಅಲ್ಲ ಅಲ್ಲ ಒಳಗಿರುವ ಪರಮಾತ್ಮ ಶಾಂತನಾಗ್ತಾನೆ.  
ಕೆಲಸ ಮುಗಿದ ನಂತರ ಮರಳಿ ಸಂಜೆ ೬-೪೦ರ ಟ್ರೇನ್ ಹತ್ತುವ ಇವರು ಕೆಲಸದ ವೇಳೆ ನಡೆದ ಘಟನೆ, ಅಥವಾ ಕೆಲಸದ ಬಗ್ಗೆ ಚರ್ಚಿಸುತ್ತಾರೆ.ಇನ್ನು ಕೆಲವರು ಹಾಡು ಹೇಳ್ತಾರೆ. ಗಾಡಿಯಲ್ಲಿ ಬರುವ ಶೇಂಗಾ(ಕಡೆಲೇಕಾಯಿ) ತಿಂತಾರೆ.ಎಲೆ ಅಡಿಕೆಯಂತೂ ಇವರ ಸದಾ ಇರುತ್ತದೆ. ಯುವಕರ ಬಾಯಲ್ಲಿ ಗುಟಕಾ ಸದಾ ಇರುತ್ತದೆ.

ದುಡಿಮೆ ಕೊಟ್ಟ ಹುಬ್ಬಳ್ಳಿ

ಸಕಾಲಕ್ಕೆ ಮಳೆಯಾಗದೇ   ಕೃಷಿ ಚಟುವಟಿಕೆಗೆ  ಹಿನ್ನಡೆಯಾದ ಕಾರಣ ಇಂದು ಹುಬ್ಬಳ್ಳಿ ಸುತ್ತಲಿನ ಅನೇಕ ಗ್ರಾಮೀಣ ಯುವಕರು ಕೆಲಸ ಅರಸಿ ಹುಬ್ಬಳ್ಳಿಗೆ ಬರುತ್ತಿದ್ದಾರೆ. ತುಮಕೂರು,ಕೋಲಾರ, ಚಿಕ್ಕಬಳ್ಳಾಪುರ ಯುವಕರು ಹೇಗೆ ಕೆಲಸಕ್ಕೆಂದು ಬೆಂಗಳೂರಿನ ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಗೆ ಬರ್ತಾರೋ ಹಾಗೆ ಇವರೂ ನಿತ್ಯ ಹುಬ್ಬಳ್ಳಿಗೆ ಬರ್ತಾರೆ. ಊರಲ್ಲಾದರೆ ಬರೀ ೧೨೦ ರಿಂದ ೧೫೦ ರೂ ಕೂಲಿ. ಅದೇ ಹುಬ್ಬಳ್ಳಿಯಲ್ಲಾದರೆ ೨೫೦ ರೂ ನಿಂದ ೩೦೦ ವರೆಗೂ ಸಿಗುತ್ತದೆ. ಊರಲ್ಲಿ  ಕೃಷಿಚಟುವಟಿಕೆಗಳಿದ್ದಾಗ ಮಾತ್ರ ಕೆಲಸ. ಉಳಿದ ದಿನ ಕೆಲಸ ಇಲ್ರಿ. ಅದ ಹುಬ್ಬಳ್ಳಿಗೆ ಬಂದ್ರ ದಿನಾನೂ ಕೆಲಸ ಸಿಗ್ತೆತ್ರಿ ಅಂತಾ ಹೇಳ್ತಾನೆ ಚಾಕಲಬ್ಬಿಯ ಪರಮೇಶಪ್ಪ. ಎರಡು ವರ್ಷದಿಂದ ನಿತ್ಯ ಹುಬ್ಬಳ್ಳಿಗೆ ಕೆಲಸಕ್ಕೆ ಬರುತ್ತಿರುವ ಗುಡಿಗೇರಿಯ ಚಂದ್ರು ಹೇಳುವಂತೆ ಹಳ್ಳ್ಯಾಗ ಕೆಲಸ ಇಲ್ರಿ. ಮತ್ತ ನಮಗೂ ಹೊಸಾದೇನರ ಬೇಕ್ರಿ. ಹೊಲಮನಿ ಕೆಲಸಕ್ಕಿಂತ ಪೇಂಟಿಂಗ್ ಅಥವಾ ಬಾರ್‌ಬೆಂಡಿAಗ್ ಕೆಲಸ ಕಲ್ತೇವ್ರೀ ಅಂತಾ ಹೇಳಿದಾಗ ಯುವಕರು ಕೃಷಿಯಿಂದ ವಿಮುಖರಾಗುತ್ತಿರುವುದಕ್ಕೆ ಒಂದು ಉತ್ತಮ ನಿದರ್ಶನ ಸಿಕ್ತು. ಒಂದAತೂ ಸ್ಪಷ್ಟ ತುತ್ತಿನ ಚೀಲ ತುಂಬಿಸಲು ಬುತ್ತಿ ಚೀಲ ತಗೊಂಡು ನಿತ್ಯ ಹುಬ್ಬಳ್ಳಿಗೆ ಹೊರಡುವ ಈ ಜನರು ಬದುಕು ಕಟ್ಟಿಕೊಳ್ಳುವತ್ತ ಚಿಂತನೆ ನಡೆಸೋದು ಈ ರೈಲು ಬಂಡಿಯಲ್ಲೇ. ಸಾಧ್ಯವಾದರೆ ಇವರೊಡನೆ ಒಮ್ಮೆ ಪ್ರಯಾಣ ಬೆಳೆಸಿ ನೋಡಿ ಮಜಾನೂ ಬರುತ್ತೆ ಮತ್ತೆ ಇವರ ಕಷ್ಟದ ಅರಿವು, ಅನಿವಾರ್ಯತೆಯೂ ಗೊತ್ತಾಗುತ್ತೆ.