ರಾಮಮಂದಿರದ ಕನಸಿನ ಸಾರಥಿಗೆ ರತ್ನದ ಮುಕುಟ
-ಪ್ರಸನ್ನ ಕರ್ಪೂರ
ಬಿಜೆಪಿಯ ಏಳ್ಗೆಗೆ ಇಡೀ ಜೀವನವನ್ನೇ ಮುಡಿಪಿಟ್ಟ ಭೀಷ್ಮ, ರಥಪುರುಷ ಹಾಗೂ ಉಕ್ಕಿನ ಮನುಷ್ಯ ಖ್ಯಾತಿಯ ಲಾಲಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆಯಾಗಿದೆ. ಆ ಮೂಲಕ ಪ್ರಶಸ್ತಿಯ ಘನತೆ ಹೆಚ್ಚಾಗಿದೆ ಎಂದರೆ ಅತಿಶಯೋಕ್ತಿಯಾಗದು. ಹಿಂದುತ್ವದ ಕಮಂಡಲ ಹಿಡಿದು ರಥ ಏರಿ ದೇಶದ 10 ರಾಜ್ಯಗಳ ಮೂಲಕ 10 ಸಾವಿರ ಕಿಮೀ ಉದ್ದಗಲಕ್ಕೂ ಸುತ್ತಿದ ಈ ಲಾಲಕೃಷ್ಣರಿಗೆ ತಡವಾಗಿಯಾದರೂ ಅತ್ಯುನ್ನತ ಗೌರವ ಸಿಕ್ಕಿದೆ. 80ರ ದಶಕದಲ್ಲಿ ರಾಮ ಮಂದಿರಕ್ಕಾಗಿ ನಡೆದ ಚಳವಳಿಯ ನೇತೃತ್ವವನ್ನು ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ವಹಿಸಿದ್ದರು. ಬಿಜೆಪಿಯ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಅಡ್ವಾಣಿ 1989ರಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು. ಬಿಜೆಪಿಯ ಇಂದಿನ ವಿರಾಟ ರೂಪಕ್ಕೆ ಇವರ ಸುರಿಸಿದ ಬೆವರು ಅಪಾರ. ಪಕ್ಷ ಕಟ್ಟಲು ಹಗಲಿರುಳು ದೇಶದ ಮೂಲೆ ಮೂಲೆ ಸುತ್ತಾಡಿದ ರಾಜಕೀಯ ತಜ್ಞಘಿ. ಇಂದು ಅವರಿಗೆ ಭಾರತರತ್ನ ಘೊಷಣೆಯಾಗಿರುವುದನ್ನು ಪಕ್ಷಾತೀತವಾಗಿ ಎಲ್ಲರೂ ಸ್ವಾಗತಿಸಿದ್ದಾರೆ. ಇದು ಆ ವ್ಯಕ್ತಿಯ ಶಕ್ತಿ.
ಇಡೀ ದೇಶವೇ ಜ.22 ರಂದು ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನಾ ಸಂಭ್ರಮದಲ್ಲಿದ್ದರೆ ಆ ಹಿರಿಯ ಜೀವ, ರಾಮಮಂದಿರ ಹೋರಾಟದ ಮೂಲಪುರುಷ ಮನೆಯಲ್ಲಿ ಕುಳಿತು ಟಿವಿಯಲ್ಲೇ ಆ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಿದ್ದರು. ತೀವ್ರ ಚಳಿ ಕಾರಣಕ್ಕೆ ಅವರು ಸಮಾರಂಭಕ್ಕೆ ಬರಲಿಲ್ಲವಾದರೂ ಆ ಸಮಾರಂಭಕ್ಕೆ ಸಾಕ್ಷಿಯಾಗಬೇಕಿತ್ತು ಎನ್ನುವ ಮನದಾಸೆ ಅವರದಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವೈವಿಧ್ಯತೆಯನ್ನು ಗೌರವಿಸುತ್ತ ಬಂದಿದ್ದು ಅವರ ರಾಜನೀತಿಯ ವಿಶೇಷತೆ. ತಮ್ಮ ತತ್ವಘಿ, ಸಿದ್ಧಾಂತವನ್ನು ವಿರೋಧಿಸುವವರನ್ನು ಶತ್ರುಗಳೆಂದು ಪರಿಗಣಿಸಬಾರದೆಂಬುದು ಅವರ ಸ್ಪಷ್ಟೋಕ್ತಿಯಾಗಿತ್ತು. ರಾಜಕೀಯ ಪಕ್ಷಗಳು ರಾಜಕೀಯವಾಗಿ ಹಾಗೂ ವೈಯಕ್ತಿಕವಾಗಿ ಪ್ರತಿಯೊಬ್ಬ ನಾಗರಿಕನ ಆಯ್ಕೆಯ ಸ್ವಾತಂತ್ರ್ಯವನ್ನು ಎತ್ತಿಡಿಯಲು ಬದ್ಧರಾಗಿರಬೇಕು ಎನ್ನುವ ಅವರ ನಿಲುವು ಸಾರ್ವಕಾಲಿಕ.
ಅದೊಂದು ಕಾಲವಿತ್ತು. ಅಡ್ವಾಣಿ ಅವರ ಹೆಸರು ಕೇಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಪುಟಿದೇಳುತ್ತಿತ್ತು. ಕಾಲ ಕ್ರಮೇಣ ಈ ಹಿರಿಯ ಜೀವಿ ನೇಪಥ್ಯಕ್ಕೆ ಸರಿಯಬೇಕಾಯಿತು.ಅಡ್ವಾಣಿ ಯುಗಾಂತ್ಯವಾಗಿ ಮೋದಿ ಶಕೆ ಆರಂಭವಾಯಿತು. ಅನುಭವ ಮತ್ತು ರಾಜಕೀಯ ನಡೆ ನುಡಿಗಳಲ್ಲಿ ಅನುಕರಣೀಯರಾಗಿದ್ದ ಅಡ್ವಾಣಿ ತೆರೆಮರೆಗೆ ಸರಿದಾಗ ಒಳಗೊಳಗೆ ನೊಂದಿದ್ದುಂಟು. ಅಟಲ್ ಜಿ ನಂತರ ದ್ವಿತೀಯ ಸ್ಥಾನದ ನಂತರದಲ್ಲಿದ್ದ ಅವರು ಪ್ರಥಮ ಸ್ಥಾನಕ್ಕೆ ಬರದೇ ಇದ್ದುದು ವಿಪರ್ಯಾಸ. ಸ್ವರ್ಣಜಯಂತಿ ರಥಯಾತ್ರೆ, ಭಾರತ ಉದಯ ಯಾತ್ರೆ, ಭಾರತ ಸುರಕ್ಷಾಯಾತ್ರೆ, ಜನಚೇತನ ಯಾತ್ರೆ ಹೀಗೆ ರಥಯಾತ್ರೆಗಳ ಸರದಾರ ಲಾಲಕೃಷ್ಣ ಅವರಾಗಿದ್ದರು. ರಾಜಕೀಯ ಸೋಲುಗಳಿಗೆ ಎಂದೂ ನಿರಾಶರಾಗದ ಅಡ್ವಾಣಿಯವರಿಗೆ ತಾವು ಕಟ್ಟಿದ ಪಕ್ಷ ತಮ್ಮನ್ನು ಮೂಲೆಗಟ್ಟಿತು ಎಂಬ ಕೊರಗು ಕಾಡಿದ್ದು ಮಾತ್ರ ಸತ್ಯ
.ಜೀವನ ಪರ್ಯಂತ ಸಾರ್ವಜನಿಕ ಸೇವೆಯಲ್ಲಿ ಸದಾ ಮುನ್ನಡೆದ ಒಬ್ಬ ವ್ಯಕ್ತಿಗೆ ಮಾನಸಿಕವಾಗಿ ಹಿಂದೆ ಹೆಜ್ಜೆ ಇಡಬೇಕೆನ್ನುವುದು ಅಷ್ಟೊಂದು ಸುಲಭಸಾಧ್ಯವಲ್ಲ. ಅನಿವಾರ್ಯತೆ ಒಪ್ಪಿಕೊಂಡ ನಂತರದಲ್ಲಿ ಅವರು ತೆರೆಮರೆಗೆ ಸರಿದರು. ಅನಾರೋಗ್ಯ ನೆಪವೊಡ್ಡಿ ಹಲವು ವರ್ಷಗಳಿಂದ ದೂರ ಸರಿದಿದ್ದು ಕೂಡ ಅವರ ತಾಳ್ಮೆ, ಸಹನೆಯ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ.