Thursday, January 25, 2024

ಗಾಯನ ವಾದನ ಅರಣ್ಯಕುಮಾರ ಸಾಧನ


ಗಾಯನ ವಾದನ ಅರಣ್ಯಕುಮಾರ ಸಾಧನ


ಏ ಹುಡುಗ ನಿಮ್ಮಂಥವರೆಲ್ಲಾ ಪೇಟಿ(ಹಾರ್ಮೋನಿಯಂ) ಬಾರಿಸೋದು ಅಲ್ಲ ಹೋಗು ಎಂದು ಊರಿನ ನಾಟಕದ ಹಾರ್ಮೋನಿಯಂ ಮಾಸ್ತರ್ ಹೀಯ್ಯಾಳಿಸಿ ಕೊಟ್ಟ ಮಾತಿನ ಏಟು ಇಂದು ನಾಡಿಗೆ ಒಬ್ಬ ಉತ್ತಮ ಸಂಗೀತಗಾರ, ಬಹುವಾದ್ಯ ಕಲಾವಿದ ಸಿಗಲು ಕಾರಣವಾಗಿದೆ. ಅವರ ಮೂದಲಿಕೆ ಆ ಸಾಧಕನಲ್ಲಿ ಸಾಧನೆÉಯ ಕಿಚ್ಚು ಹಚ್ಚಿದ ಪರಿಣಾಮ ಸಂಗೀತದ ತವರು ಧಾರವಾಡ ಸದ್ಯಕ್ಕೆ ಡಾ. ಅರಣ್ಯಕುಮಾರ ಮುನ್ನೇನಿ ಎಂಬ ಸಂಗೀತ ಆರಾಧಕ ಬಹುವಾದ್ಯ ನುಡಿಸುವವರ ಕರ್ಮಭೂಮಿಯಾಗಿದೆ.ಅವರ ಪ್ರತಿಭೆಗೆ ವೇದಿಕೆಯಾಗಿದೆ.
  ಡಾ. ಅರಣ್ಯಕುಮಾರರಿಗೆ ಸಂಗೀತ, ವಾದ್ಯ ನುಡಿಸುವುದು ಹಿರಿಯರ ಬಳುವಳಿ. ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಗಜಮಿನಾಳದವರಾದ ಇವರ ಮುತ್ತಜ್ಜ ಶಿವಾನಂದ ಒವಿ ಬಯಲಾಟಕಾರರು, ತಂದೆ ಮಡ್ಡೆಪ್ಪ ತಾಯಿ ಸರಸ್ವತಿ ಅಧ್ಯಾತ್ಮಜೀವಿಗಳು ಹಾಗೂ ಭಜನಾಕಾರರು. ಇವರ ತಾಯಿ ತಂದೆ ಕೂಡ ವಾಯಲನಿಸ್ಟ್ ಆಗಿದ್ದರು.ಮನೆಯಲ್ಲಿ ನಿತ್ಯ ವಚನಸಂಗೀತ, ಭಜನೆ ನಡೆಯುತ್ತಿದ್ದುದು ಸಹಜವಾಗಿಯೇ ಇವರಲ್ಲಿ ಸಂಗೀತಾಭಿರುಚಿ ಚಿಗುರೊಡೆಯಲು ಕಾರಣವಾಯಿತು. ಕ್ರಮೇಣ ಅದನ್ನೇ ಜೀವನದ ಗುರಿಯಾಗಿಸಿಕೊಂಡ ಅರಣ್ಯಕುಮಾರರ ಅವಿರತ ಯತ್ನ ಅವರನ್ನು ಹಲವು ಊರುಗಳಿಗೆ ಅಲೆದಾಡಿಸಿದ್ದು ವಿಶೇಷ. ಮನೆಯಲ್ಲಿದ್ದ ಹಣ ತೆಗೆದುಕೊಂಡು ಹೋಗಿ ತಬಲಾ ಕಲಿಯಬೇಕೆಂಬ ಆಸೆಗೆ ಬಿದ್ದು ಉಡುಪಿಗೆ ಓಡಿ ಹೋದರು.ನಂತರ ಪಿಯುಸಿ ಜತೆ ಸಂಗೀತ ಕಲಿಯಲು ಗದಗಿನ ಪುಟ್ಟರಾಜ ಗವಾಯಿಗಳ ಆಶ್ರ್ರಮ ಸೇರಿದರು. ಬೆಳಗ್ಗೆ ಸಂಗೀತಾಭ್ಯಾಸ ಸಂಜೆ ಮೇಲೆ ಹೋಟೆಲ್ ಹಾಗೂ ಬಡಿಗತನದ ಕೆಲಸ. ಬಡತನವನ್ನು ಬೆನ್ನಿಗೆ ಕಟ್ಟಿಕೊಂಡು ಸಂಗೀತ ಬೆನ್ನುಹತ್ತಿದ ಅರಣ್ಯಕುಮಾರ ಇಂದು ನಾಡಿನ ಹೆಮ್ಮೆಯ ಕಲಾವಿದ ಹಾಗೂ ಸಂಗೀತಗಾರರಾಗಿದ್ದಾರೆ. ಬೆಳಗಾವಿಯ ಕಾದ್ರೋಳಿ ಮಠದ ಪಾಲಾಕ್ಷದೇವ ಗುರೂಜಿ ಬಳಿ ಇದ್ದಾಗ ಅವರಿಂದ ಸಿಕ್ಕ ಪ್ರೋತ್ಸಾಹ ಇವರ ತುಡಿತ ಇಮ್ಮಡಿಗೊಳಿಸಿತು. ಕಾದ್ರೋಳಿಯ ಶ್ರೀಮಂತ ಹಿನ್ನೆಲೆಯ ನಾಲ್ವರು ವಿದ್ಯಾರ್ಥಿಗಳಿಗೆ ಧಾರವಾಡದಲ್ಲಿ ಮನೆ ಮಾಡಿಕೊಟ್ಟು ಅವರ ಉಸ್ತುವಾರಿ ಜತೆಗೆ ಅಡುಗೆ ಮಾಡಿ ಹಾಕಿ ತಮ್ಮ ಬದುಕು ರೂಪಿಸಿಕೊಂಡ ಅರಣ್ಯಕುಮಾರ.ಬಡತನದ ಬೆಂಕಿಯಲ್ಲಿ ಅರಳಿದ ಪ್ರತಿಭೆ.
ಬಹುಮುಖ ಪ್ರತಿಭೆ
ಅರಣ್ಯಕುಮಾರರದು ಬಹುಮುಖ ಪ್ರತಿಭೆ. 12 ರಿಂದ 13 ವಾದ್ಯಗಳನ್ನು ನುಡಿಸುವುದು ಇವರಿಗೆ ಕರಗತ. ಸಿತಾರ್ ನುಡಿಸುವುದರಲ್ಲಿ ಇವರದು ಎತ್ತಿದ ಕೈ. ಧಾರವಾಡದ ವಿದ್ಯಾವತಿ ವಾಜಪೇಯಿ ಅವರಿಂದ ದಿಲ್‍ರುಬಾ ಎಂಬ ಅಪರೂಪದ ವಾದ್ಯ ನುಡಿಸುವುದನ್ನು ಕಲಿತಿದ್ದಾರೆ. ಸಂಗೀತದ ಸವಿ ಇವರಲ್ಲಿ ಭದ್ರವಾಗಿ ನೆಲೆಯೂರಿದೆ.ಸಿತಾರ್ ತಂತಿಯ ಮೀಟುವಲ್ಲಿ ಪ್ರಯೋಗಗಳನ್ನು ಮಾಡುವುದು ಇವರ ವಿಶೇಷತೆ. ವಾದನ-ಗಾಯನ ಎರಡರಲ್ಲೂ ಇವರು ನಿಪುಣ.ಮನೆಯಲ್ಲಿ ಬಹುತೇಕ ವಾದ್ಯಗಳನ್ನು ಇಟ್ಟುಕೊಂಡಿದ್ದಾರೆ. ಅವುಗಳ ದುರಸ್ತಿಯನ್ನೂ ಮಾಡುತ್ತಾರೆ. ಧಾರವಾಡದ ಹಲವೆಡೆ ಸಂಗೀತ ಕ್ಲಾಸ್ ನಡೆಸುತ್ತಾರೆ ಜತೆ ಜತೆಗೆ ಕಛೇರಿಗಳಲ್ಲೂ ಭಾಗವಹಿಸುತ್ತಾರೆ. ಪುಣೆಯ ಸುಧೀರ ಫಡ್ಕೆ ಹಾಗೂ ಧಾರವಾಡದ ಉಸ್ತಾದ್ ಹಮೀದ ಖಾನ್ ಅವರ ಬಳಿ ಸಿತಾರ ಕಲಿತಿರುವ ಇವರು 2004ರಿಂದ ಪಂ.ರಾಜೀವ ತಾರಾನಾಥರ ಬಳಿ ಸರೋದ ಕಲಿಯುತ್ತಿದ್ದಾರೆ. ವಾದ್ಯ ಸಂಗೀತದ ಸಾಧನೆ ಅಪರೂಪದ್ದು ಎನ್ನುವ ಅರಣ್ಯಕುಮಾರ ಈಗಲೂ ತಡರಾತ್ರಿವರೆಗೆ ರಿಯಾಜ್ ಮಾಡುತ್ತಾರೆ. ಹಲವು ಪ್ರಯೋಗಶೀಲತೆಗೆ ತಮ್ಮನ್ನು ಒಡ್ಡಿಕೊಳ್ಳುತಿದ್ದಾರೆ. ಎಲ್ಲ ವರ್ಗದ ವಾದ್ಯಪ್ರಿಯರಿಗೆ ಅನುಕೂಲವಾಗಲೆಂದು ಕಡಿಮೆ ವೆಚ್ಚದಲ್ಲಿ ಸಿತಾರ್‍ಗಳನ್ನು ತಯಾರಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಸಂಗೀತ ಸರಸ್ವತಿ ಇವರ ನಾಲಿಗೆ ಮೇಲೆ ನಲಿದಾಡುತ್ತಿದ್ದಾಳೆ. ಇವರ ಬೆರಳುಗಳಲ್ಲಿ ಮಿಂಚಿನ ವೇಗವಿದೆ. ಇವರು ಸಿತಾರ್ ನುಡಿಸುತ್ತಿದ್ದಂತೆ ನೆರೆದ ಶ್ರೋತ್ರುಗಳು ಮೈಮರೆಯುತ್ತಾರೆ.
ವಿದೇಶದಲ್ಲೂ ಕಛೇರಿ
 ಸಂಗೀತದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಜತೆಗೆ ಡಾಕ್ಟರೇಟ್ ಕೂಡ ಪಡೆದಿದ್ದಾರೆ. ಅಲ್ಲದೇ ಕಳೆದ 13 ವರ್ಷಗಳಿಂದ ಕರ್ನಾಟಕ ಕಾಲೇಜ್‍ನ ಸಂಗೀತ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2013ರಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ(ಕನ್ನಡ ಮತ್ತು ಇಂಗ್ಲಿಷ್) ಸರಕಾರ ಪ್ರಕಟಿಸಿದ ಸಂಗೀತ ಸಂಪದ ಪುಸ್ತಕದ ಸಹ ಸಂಪಾದಕರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.
ಹಿಂದೂಸ್ತಾನಿ ಸಮಯ ರಾಗ ಪರಿಚಯ ಎಂಬ ಪುಸ್ತಕ ಕೂಡ ಬರೆದಿದ್ದು ಕನ್ನಡ ಪುಸ್ತಕ ಪ್ರಾಧಿಕಾರ ಇದನ್ನು ಪ್ರಕಟಿಸಿದೆ. ಇಟಲಿ, ಅಮೆರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಇವರ ಸಿತಾರ್ ಮಾಧುರ್ಯ ಅನುಸರಣಿಸಿದೆ. ರಾಷ್ಟ್ರದ ಹಲವು ವೇದಿಕೆಗಳಲ್ಲಿ ದಿಗ್ಗಜರ ಜತೆ ಜುಗಲ್‍ಬಂದಿ ನಡೆಸಿ ಸೈ ಎನಿಸಿಕೊಂಡಿದ್ದಾರೆ. ಇವರ ಸಂಗೀತ ಪಯಣದ ಬಗ್ಗೆ ದೆಹಲಿ ದೂರದರ್ಶನ ಒಂದು ಸಾಕ್ಷ್ಯಚಿತ್ರ ಪ್ರಸಾರ ಮಾಡಿದೆ. ಆಕಾಶವಾಣಿಯಲ್ಲಂತೂ ಇವರ ಕಾರ್ಯಕ್ರಮಗಳು ನಿರಂತರ ನಡೆಯುತ್ತಲೇ ಇರುತ್ತವೆ. ಪರ್ಯಾಯವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಸಂಗೀತ ವಾದ್ಯಗಳನ್ನು ಹೇಗೆ ತಯಾರಿಸಬಹುದು ಎಂಬುದರ ಬಗ್ಗೆ ಸಂಶೋಧನೆ ಮತ್ತು ಅದರ ತಯಾರಿಕೆಯಲ್ಲಿ ಪ್ರಸ್ತುತ ಇವರು ನಿರತರಾಗಿದ್ದಾರೆ.ಕಳೆದ ಒಂದು ವರ್ಷದಿಂದ ಸಾಕ್ಸೋಫೋನ್ ಮತ್ತು ವಾಯಲಿನ್ ಒಳಗೊಂಡ ಸ್ಯಾಕ್ಸೊಲಿನ್ ಎನ್ನುವ ಹೊಸ ವಾದ್ಯ ತಯಾರಿಸುವ ಯೋಜನೆ ಕೈಗೆತ್ತಿಕೊಂಡಿದ್ದಾರೆ. ರಾಷ್ಟ್ರೀಯ ಯುವಜನೋತ್ಸವದಲ್ಲಿ ಎರಡು ಬಾರಿ ಸತತವಾಗಿ ಪ್ರಥಮ ಸ್ಥಾನ ಪಡೆದಿದ್ದಾರೆ.
  ಇವರ ಸಾಧನೆ ಅರಸಿ ಇತ್ತೀಚೆಗೆ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಯುವ ಪುರಸ್ಕಾರ ಬಂದಿದೆ. ಸಾಧನೆ ನಿತ್ಯ ನಿರಂತರ ಪ್ರಶಸ್ತಿ ಪುರಸ್ಕಾರಗಳು ಪೂರಕ ಹಾಗೂ ಪ್ರೇರಕ ಶಕ್ತಿ ಎನ್ನುವ ಅರಣ್ಯಕುಮಾರ ಸಹೃದಯದ ಕಲಾವಿದ ಕೂಡ ಹೌದು.

ಶೆಟ್ಟರ್ ಮರಳಿ ತವರಿಗೆ ಲಾಭ ಯಾರಿಗೆ?


 ಶೆಟ್ಟರ್ ಮರಳಿ ತವರಿಗೆ ಲಾಭ ಯಾರಿಗೆ?

 -ಪ್ರಸನ್ನ ಕರ್ಪೂರ

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆಗಳು ನಡೆಯುತ್ತಿವೆ. ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು ಗುರುವಾರ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಮತ್ತೆ ಮಾತೃಪಕ್ಷ ಬಿಜೆಪಿಗೆ ಮರಳಿದ್ದಾರೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಹು-ಧಾ ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿದ್ದಕ್ಕೆ ಕೈ ಹಿಡಿದಿದ್ದ ಶೆಟ್ಟರ್ ಸರಿಯಾಗಿ 9 ತಿಂಗಳು ನಂತರ ಮತ್ತೆ ಮಾತೃಪಕ್ಷಕ್ಕೆ ಮರಳಿದ್ದಾರೆ.

ಬಿಎಸ್‌ವೈ ಮೇಲುಗೈ

 ಶೆಟ್ಟರ್ ಮರುಸೇರ್ಪಡೆ ಬೆಳವಣಿಗೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮೇಲುಗೈ ಸಾಧಿಸಿರುವುದು ಸ್ಪಷ್ಟ ಮತ್ತು ಬಿಜೆಪಿ ಮುಖಂಡ ಬಿ.ಎಲ್. ಸಂತೋಷ ಅವರಿಗೆ ಹಿನ್ನಡೆ ಎನ್ನುವುದು ಕೂಡ ಸ್ಪಷ್ಟ.  ಎಲ್ಲಕ್ಕಿಂತ ಮೇಲಾಗಿ ಮರು ಸೇರ್ಪಡೆ ವೇಳೆ ಸಚಿವ ಪ್ರಲ್ಹಾದ ಜೋಶಿ ಅವರ ಅನುಪಸ್ಥಿತಿಯೂ ಎದ್ದು ಕಂಡಿದ್ದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ಈ ಮಧ್ಯೆ ಧಾರವಾಡ ಹಾಲಿ ಸಂಸದ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮುಂದಿನ ನಡೆ ಕಾದು ನೋಡಬೇಕಿದೆ. ಮೇಲ್ನೋಟಕ್ಕೆ ಸಚಿವ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ  ಶಾಸಕ ಟೆಂಗಿನಕಾಯಿ ಆದಿಯಾಗಿ ಎಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ಧರಿದ್ದೇವೆ. ವರಿಷ್ಠರು ಅಳೆದು ತೂಗಿ ಎಲ್ಲವನ್ನೂ ಪರಿಶೀಲಿಸಿ ಸೂಕ್ತ ನಿರ್ಧಾರ ಕೈ ಗೊಳ್ಳುತ್ತಾರೆ ಎಂದು ಹೇಳಿದರೂ ಒಳಗುಟ್ಟು ಬೇರೆನೇ ಇದೆ ಎನ್ನುವ ಪಿಸು ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಶೆಟ್ಟರ್ ಘರವಾಪ್ಸಿ ಎಷ್ಟು ಜನರಿಗೆ ಇಷ್ಟ? ಮುಕ್ತ ಮನಸ್ಸಿನಿಂದ ಎಷ್ಟು ಜನ ಸ್ವಾಗತಿಸುತ್ತಾರೆ? ಎನ್ನುವುದು ಈಗಿರುವ ಪ್ರಶ್ನೆ. ಶೆಟ್ಟರ್ ಮರಳಿ ಪಕ್ಷಕ್ಕೆ ಇಂದಿಲ್ಲಾ ನಾಳೆ ಬಂದೇ ಬರುತ್ತಾರೆ ಎನ್ನುವ ವಿಶ್ವಾಸ ಬಿಜೆಪಿಯವರಿಗೆ ಇತ್ತುಘಿ. ಅದಕ್ಕೆಂದೇ ಬಿಜೆಪಿ ಅಸೆಂಬ್ಲಿ ಚುನಾವಣೆಯಲ್ಲಿ ಅವರನ್ನು ಹೀನಾಯವಾಗಿ ಸೋಲಿಸಿತು. ಆ ಮೂಲಕ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಇದು ಕಾರ್ಯಕರ್ತರ ಪಕ್ಷಘಿ. ಅವರೇ ಪಕ್ಷದ ಶಕ್ತಿ . ಪಕ್ಷದ ಚಿನ್ಹೆಯಡಿ ಯಾರೇ ಸ್ಪರ್ಧಿಸಿದರೂ ಗೆಲುವು ಖಚಿತ ಎಂಬುದನ್ನು ಲಿತಾಂಶದ ಮೂಲ ಸಾರುವಲ್ಲಿ ಯಶಸ್ವಿಯಾಗಿತ್ತು.

ಶಂಕರ ಪಾಟೀಲರ ಕಾರ್ಯಾಚರಣೆ

ಶೆಟ್ಟರ್ ಮರುಸೇರ್ಪಡೆಯಿಂದ ಬಿಜೆಪಿಗೆ ಅದರಲ್ಲೂ ಪ್ರಲ್ಹಾದ ಜೋಶಿ ಅವರಿಗೆ ಪ್ಲಸ್ ಆಗುವುದೇ? ಹಿಂದೆ ಒಂದೊಮ್ಮೆ ಜೋಡೆತ್ತಿನಂತಿದ್ದ  ಶೆಟ್ಟರ್ ಜೋಡಿ ಅಗಲಿದ್ದು ಸಾಕಷ್ಟು ಚರ್ಚೆಯಾಗಿತ್ತು. ಹು-ಧಾ ಸೆಂಟ್ರಲ್ ಕ್ಷೇತ್ರದ ಟಿಕೆಟ್ ನಿರಾಕರಣೆ ಮುಂದಿಟ್ಟುಕೊಂಡು ಪಕ್ಷ ತೊರೆದಿದ್ದ ಶೆಟ್ಟರ್ ಪ್ರಲ್ಹಾದ ಜೋಶಿ ಅವರ ವರ್ತನೆ ಬಗ್ಗೆಯೂ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ನಂತರದ ದಿನಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ವಾಗ್ದಾಳಿಯೂ ನಡೆದಿತ್ತು. ಇನ್ನೊಂದೆಡೆ ಮಾಜಿ ಸಚಿವ ಶಂರ ಪಾಟೀಲ ಮುನೇನಕೊಪ್ಪ ಕೂಡ ಬಿಜೆಪಿ ತೊರೆಯುತ್ತಾರೆ ಎಂಬ ನಿರೀಕ್ಷೆ ಇತ್ತುಘಿ. ಕೆಲ ದಿನಗಳ ಹಿಂದೆ ನಡೆದ ಮೂರು ರಾಜ್ಯಗಳ ಚುನಾವಣಾ ಲಿತಾಂಶದಿಂದ ತಮ್ಮ ನಿರ್ಧಾರ ಬದಲಿಸಿದ್ದಲ್ಲದೇ ಶೆಟ್ಟರ್ ಹಿಂದೆ ಹೆಜ್ಜೆ ಹಾಕದೇ ಶೆಟ್ಟರನ್ನೇ ತವರಿಗೆ ಮರಳಿ ತರುವಲ್ಲಿ ಶಂಕರ ಪಾಟೀಲ ಯಶಸ್ವಿಯಾಗಿದ್ದಾರೆ. 

ಸದ್ಯಕ್ಕೆ ಪಕ್ಷ ಸೇರ್ಪಡೆ ಬಗ್ಗೆ ಮಾತ್ರ ಮಾತನಾಡಿರುವ ಶೆಟ್ಟರ್ ಮರುಸೇರ್ಪಡೆಗೆ ಏನಾದರೂ ಷರತ್ತು ಹಾಕಿದ್ದಾರಾ? ಧಾರವಾಡ ಕ್ಷೇತ್ರದಿಂದ ಲೋಕಸಭೆ ಟಿಕೆಟ್ ಕೇಳಿದ್ದಾರಾ? ಎನ್ನುವ ಸಂಗತಿಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಶೆಟ್ಟರ್ ಅವರನ್ನು ಹಾವೇರಿ ಇಲ್ಲವೇ ಬೆಳಗಾವಿಯಿಂದ ಚುನಾವಣೆಗೆ ನಿಲ್ಲಿಸುವ ವಿಚಾರ ವರಿಷ್ಠರ ಮುಂದಿದೆಯಾ? ಇನ್ನೊಂದು ಮೂಲಗಳ ಪ್ರಕಾರ ಪ್ರಲ್ಹಾದ ಜೋಶಿ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿಸಿ ಜತೆಗೆ ರಾಜ್ಯಸಭೆ ಸದಸ್ಯರನ್ನಾಗಿಯೂ ಮಾಡುವ ಆಲೋಚನೆ ಹೈ ಕಮಾಂಡ್ ನದ್ದಾಗಿದೆ. ಧಾರವಾಡ ಕ್ಷೇತ್ರದಿಂದ ಲಿಂಗಾಯತ ಸಮುದಾಯದವರಿಗೆ ಟಿಕೆಟ್ ಕೊಡಲಾಗುತ್ತಿದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಒಟ್ಟಾರೆ ಶೆಟ್ಟರ್ ಘರ ವಾಪ್ಸಿ ಹಲವು ಬೆಳವಣಿಗೆಗಳಿಗೆ ಮುನ್ನುಡಿ ಬರೆದಿದೆ. ಇದೇ ವೇಳೆ ಶೆಟ್ಟರ್ ಅವರನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಎಷ್ಟು ಮುಕ್ತವಾಗಿ ಒಪ್ಪಿಕೊಳ್ಳುತ್ತಾರೆ? ಮೊದಲಿನಂತೆಯೇ ಅಪ್ಪಿಕೊಳ್ಳುವುರಾ?ಗತವೈಭವ ಮರಕಳಿಸವುದೇ ಕಾದು ನೋಡಬೇಕಿದೆ.

ಬೆಳಗಾವಿ ಎಂಪಿ ಟಿಕೆಟ್ ಆಕಾಂಕ್ಷಿಗಳ ತಳಮಳ

ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರ್ಪಡೆ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ ಉಂಟುಮಾಡಿದೆ. ಶೆಟ್ಟರ್ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಒಪ್ಪಂದದೊಂದಿಗೇ ಬಿಜೆಪಿಗೆ ಮರಳಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.  ಹುಬ್ಬಳ್ಳಿ-ಧಾರವಾಡ, ಹಾವೇರಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಗಳ ಪೈಕಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಒಪ್ಪಂದೊಂದಿಗೆ ಜಗದೀಶ ಶೆಟ್ಟರ್ ಬಿಜೆಪಿಗೆ ಮರಳಿದ್ದಾರೆ ಎನ್ನಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಈಗಾಗಲೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಭಾವಿಯಾಗಿರುವುದರಿಂದ ಅವರ ಜತೆ ಜಗದೀಶ ಶೆಟ್ಟರ್ ಟಿಕೆಟ್ ೈಟ್ ನಡೆಸುವ ಸಾಧ್ಯತೆ ಕಡಿಮೆ. ಇನ್ನು, ಹಾವೇರಿ ಕ್ಷೇತ್ರದಲ್ಲಿ ಶೆಟ್ಟರ್ ಹೆಚ್ಚು ಪ್ರಭಾವ ಹೊಂದಿಲ್ಲ, ಹಾಗಾಗಿ ಅಲ್ಲಿ ಸ್ಪರ್ಧಿಸಿದರೆ ವರ್ಕೌಟ್ ಆಗಲಿಕ್ಕಿಲ್ಲ ಆತಂಕವೂ ಇದೆ. ಈ ಕಾರಣ ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೆ ಶೆಟ್ಟರ್ ಕಣ್ಣಿಟ್ಟಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.