Sunday, November 11, 2018

ಭತ್ತದ ಕೃಷಿ ವನಸಿರಿಯ ಖುಷಿ

ಭತ್ತದ ಕೃಷಿ ವನಸಿರಿಯ ಖುಷಿ




ಧೋ ಧೋ ಸುರಿವ ಮಳೆ….. ಎಲ್ಲೆಲ್ಲೂ ಹಚ್ಚ ಹಸಿರು… ದಾರಿಯ ಇಕ್ಕೆಲಗಳಲ್ಲಿ ಹಸಿರುಹೊದ್ದ ಪರ್ವತ ಶ್ರೇಣಿ. ಅಲ್ಲಲ್ಲಿ ಕಾಣುವ ಭತ್ತದ ಗದ್ದೆಗಳು. ಮಳೆ ಮಧ್ಯೆಯೇ ಭತ್ತ ನಾಟಿ ಮಾಡುವ ಜನರು…. ಇದು ಯಾವುದೋ ಅಪ್ಟಟ ಮಲೆನಾಡಿನ ಪ್ರದೇಶದ ವರ್ಣನೆಯಲ್ಲ. ಪಶ್ಚಿಮಘಟ್ಟದ ಸೆರಗಿನಲ್ಲಿ ಬರುವ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಡೇರಿಯಾ ಗ್ರಾಮದ ವನಸಿರಿಯ ವರ್ಣನೆ.
  ನಿಸರ್ಗ ಸೌಂದರ್ಯದ ಎರಕ ಹೊಯ್ದಂತಿರುವ ಈ ಗ್ರಾಮಕ್ಕೆ ಹೊರಟರೆ ಸಾಕು ಕೆನೆಗಟ್ಟಿದ ಮಂಜಿನ ಪರಿಸರ ಕೈ ಬೀಸಿ ಕರೆಯುತ್ತದೆ. ಸಮೃದ್ಧ ನೆಲ ಜಲದ ಈ ನಾಡು ಭತ್ತದ ಕಣಜ. ಭತ್ತದ ಗದ್ದೆಗಳ ಹಸಿರು ನಮ್ಮ ಉಸಿರನ್ನೇ ಆವರಿಸಿಕೊಂಡುಬಿಡುತ್ತವೆ. ಮಂದವಾದ ಮಳೆ ಮೋಡಗಳು ಎಂಥವರ ಮನದಲ್ಲೂ ಭಾವನೆಗಳನ್ನು ತೂರಿಸಿ ಜೀವರಸವನ್ನು ಸ್ಫುರಿಸುತ್ತವೆ. ದಾರಿ ಮಧ್ಯೆ ಹಸಿರೆಲೆಗಳು ಮುಖಕ್ಕೆ ಮುತ್ತಿಕ್ಕುತ್ತವೆ. ಮೈ ಮನಸ್ಸು ಪ್ರಕೃತಿಯ ಈ ಸಿರಿ ನೋಡಿ ಕುಣಿದು ಭೂದೇವಿಗೆ ನಮಿಸುತ್ತದೆ. ಮಳೆ ಹನಿಯ ಆಹ್ಲಾದಕರ ಸಿಂಚನ ಭೂಸ್ವರ್ಗದ ಅನುಭವ ಕೊಡುತ್ತದೆ. ಮಳೆಯಲ್ಲಿ ಮರೆಯಾಗಿರುವ ಪ್ರಾಣಿಗಳು ಆಗಾಗ ಧ್ವನಿ ಹೊರಡಿಸಿ ತಮ್ಮ ಅಸ್ತಿತ್ವವನ್ನು ಸದ್ದಿಲ್ಲದೇ ಸಾರುತ್ತವೆ. ದಟ್ಟವಾದ ಕಾಡಿನ ಮಧ್ಯೆ ಗಗನವನ್ನು ಚುಂಬಿಸಲು ಹೊರಟ ತೇರಾಳಿ ಗುಡ್ಡ ನೋಡುತ್ತಿದ್ದಂತೆಯೇ ಎಂಥವರೂ ಪ್ರಕೃತಿಯ ಮಡಿಲಲ್ಲಿ ಮಿಂದೇಳುತ್ತಾರೆ. ಹೊಸಬರಿಗೆ ಆರಂಭದಲ್ಲಿ ಭಯ ಎನಿಸಿದರೂ ಸಾಗುತ್ತಾ ಸಾಗುತ್ತಾ ಖುಷಿ ನೀಡುತ್ತದೆ.ನಿಸರ್ಗ ಮಾತೆ ಇಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದಾಳೆ. ಇಲ್ಲಿನ ಸೌಂದರ್ಯಾನುಭುತಿಯ ವರ್ಣನೆ ಕಲ್ಪನಾತೀತ. ಇಲಿನ ನಿಸರ್ಗ ಭಂಡಾರ ಅಪಾರ. ಉತ್ಸಾಹಿ ಮತ್ತು ಸಾಹಸಮಯ ಮನಸ್ಸಿದ್ದವರು ಇಲ್ಲೊಮ್ಮೆ ಭೇಟಿ ನೀಡಲೇಬೇಕು. ಯಾಂತ್ರಿಕ ಬದುಕಿನ ಒತ್ತಡದ ಜೀವನದಿಂದ ಮುಕ್ತಿ ಬೇಕೆಂದರೆ ಇಲ್ಲಿಗೆ ಬಂದರೆ ಸಾಕು. ನಿಸರ್ಗದ ಸವಿಯೂಟ ಎಲ್ಲರಲ್ಲೂ ಹೊಸ ಚೈತನ್ಯ ತುಂಬುವುದು ಖಚಿತ. ಭತ್ತದ ಗದ್ದೆಗಳ ಪಕ್ಕದ ಬೆಟ್ಟದ ಮೇಲಿಂದ ಹಾಲಿನ ನೊರೆಯಂತೆ ಝುಳುಝುಳು ಎನ್ನುವ ಝರಿ ಮೈಗೆ ಸಿಂಪರಣೆಯಾದಾಗ ಸಿಗುವ ಸುಖ ವರ್ಣನಾತೀತ.
 ಆಧುನಿಕತೆಯ ಸೋಂಕಿಲ್ಲದೇ ನಿಜವಾದ ಗ್ರಾಮೀಣ ಬದುಕಿನ ಈ ಡೇರಿಯಾ ಹಾಗೂ ಸುತ್ತಲಿನ ಗ್ರಾಮಗಳು ಇಂದಿಗೂ ಪಾರಂಪರಿಕ ಜೀವನಶೈಲಿ ಜತೆಗೆ ಪರಿಸರಸ್ನೇಹಿ ಬದುಕಿನ ಮಹತ್ವವನ್ನು ಸಾರಿ ಹೇಳುತ್ತಿವೆ. ಕಾಡಿನ ನಡುವೆ ಕಾಲುದಾರಿಯಲ್ಲಿ ನಿತ್ಯ ಪಯಣ ಇಲ್ಲಿನ ಜನರಿಗೆ ಹೊಸತೇನಲ್ಲ. ಇದುವೇ ಇವರ ಅಸ್ಮಿತೆ. ನಿಸರ್ಗ ಸೌಂದರ್ಯದ ವಿಚಾರದಲ್ಲಿ ಪ್ರತಿ ಹಳ್ಳಿ ಮಧ್ಯೆಯೂ ಪೈಪೋಟಿಯಿದ್ದಂತಿದೆ. ಮೂಡಿಯಾ, ಕಾಟರೊಳಿ, ಡಿಗ್ಗಿ, ಮಾಯಿರೆ, ಬೊಂಡೇಲಿ, ಪಾಡಶೇತ್ ಹೀಗೆ ಒಂದೇ ಎರಡೇ ಎಲ್ಲವೂ ನಿಸರ್ಗದ ಖಣಿಗಳೇ. ನಗರಜೀವನದಿಂದ ಬೇಸರಗೊಂಡು ಹಸಿರು ನೆಮ್ಮದಿ ಅರಸಿ ಇತ್ತ ಬಂದರೆ ಡೇರಿಯಾದ ಡೇರೇಕರ್ ಕುಟುಂಬದವರ ಆತ್ಮೀಯ ಆದರಾತಿಥ್ಯಕ್ಕೆ ಮನಸೋಲದವರಿಲ್ಲ. ಕಷಾಯ, ಕೇಸುಗಡ್ಡೆ ಪಲ್ಯೆ, ಗಡ್ಡೆ ಗೆಣಸುಗಳ ಕಡಿ (ಸಾಂಬಾರು) ಉಂಡವರಿಗೆ ಗೊತ್ತು ಅದರ ಸವಿ. ಪರಿಸರಪಾಠ, ನೆಲಮೂಲದ ಜ್ಞಾನವನ್ನು ಅಚ್ಚುಕಟ್ಟಾಗಿ ಕಲಿತ ಈ ಗ್ರಾಮದ ಜನರು ಕಾಡಿನ ನಿತ್ಯ ಒಡನಾಡಿಗಳು. ಹಸಿರು ಚೆಪ್ಪರದ ಕೆಳಗೆ ಇರುವ ಡೇರಿಯಾದ ಹುಲ್ಲಿನ ಗುಡಿಸಲುಗಳು ನೀಡುವ ಆನಂದ ಅಪರಿಮಿತ. ಇಲ್ಲಿನ ನಿಸರ್ಗದ ವಿಸ್ಮಯ ಇಲ್ಲಿ ಬಂದ ಪ್ರತಿಯೊಬ್ಬರಲ್ಲಿ ನವಚೈತನ್ಯ ಮೂಡಿಸುವುದಂತೂ ಸತ್ಯ. ಕಾಡುಪ್ರಿಯರಿಗೆ ಈ ಸ್ಥಳ ಹೇಳಿ ಮಾಡಿಸಿದ ತಾಣ

ನೆಲಜಲ ಸಂಸ್ಕøತಿ ಶೈಕ್ಷಣಿಕ ಕ್ರಾಂತಿ

ನೆಲಜಲ ಸಂಸ್ಕøತಿ ಪ್ರೀತಿಯ ವಾಗಬಂಧ
ಧ ಶಾಲೆ

ನಮಸ್ತೆ ಸಾರ್... ಗುಡ್ ಮಾರ್ನಿಂಗ್ ಸಾರ್...ವೆಲಕಮ್ ಸಾರ್.. ಹೀಗೆ ಶಾಲಾ ಕೊಠಡಿ ಪ್ರವೇಶಿಸುತ್ತಿದ್ದಂತೆ ವಿನಯಪೂರ್ವಕವಾಗಿ ಸ್ವಾಗತ ಕೋರುವ ಪದಗಳನ್ನು ಹೇಳುವವರು ಆಂಗ್ಲಮಾಧ್ಯಮ ಶಾಲೆ ಮಕ್ಕಳಲ್ಲ.  

 ಪ್ರಕೃತಿಯ ಮಡಿಲಲ್ಲಿರುವ ಜೊಯಿಡಾ ತಾಲೂಕಿನ ಕುಂಬಾರವಾಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡೇರಿಯಾ ಬಳಿಯ ವಾಗಬಂಧ ಸರಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಮಕ್ಕಳು. ಇದು ಇವರು ಅಳವಡಿಸಿಕೊಂಡ ಹಾಗೂ ಬೆಳೆಸಿಕೊಂಡ ಸಂಸ್ಕಾರದ ಪ್ರತೀಕ. ಪ್ರೀತಿ, ಗೌರವ ಕೊಡುವ ಪ್ರವೃತ್ತಿ ಇವರಲ್ಲಿ ಮನೆ ಮಾಡಿದೆ. ಜ್ಞಾನದ ಹಸಿವು ಇವರಲ್ಲಿ ಅತೀವವಾಗಿದೆ. ತೀರಾ ಹಿಂದುಳಿದ ಪ್ರದೇಶ ಹಾಗೂ ಆಧುನಿಕತೆಯ ಸೋಂಕಿಲ್ಲದಿದ್ದರೂ ಇವರ ಸಾಧನೆಯ ತುಡಿತ ಅನನ್ಯ. ವಯಸ್ಸಿನಲ್ಲಿ ಚಿಕ್ಕವರಾದರೂ ಗಟ್ಟಿ ಮನಸ್ಸಿನಿಂದ ಇವರ ಜೀವನೋತ್ಸಾಹ ಅನುಕರಣೀಯ. ಬಾಲ್ಯದಲ್ಲೇ ನೆಲ ಜಲ ಸಂಸ್ಕತಿ ಹಾಗೂ ಸ್ವಾವಲಂಬಿ ಪಾಠ ರೂಢಿಸಿಕೊಂಡ ಇವರು ಖಾಸಗಿ ಶಾಲೆಗಳಿಗೆ ಸದ್ದಿಲ್ಲದೇ ಸೆಡ್ಡು ಹೊಡೆಯುತ್ತಿದ್ದಾರೆ.

  ನಿಸರ್ಗದತ್ತ ಸುಂದರ ಪರಿಸರ ಇವರ ಪಾಲಿಗೆ ಒಲಿದಿದೆ. ಶಾಲಾ ಆವರಣದಲ್ಲಿ ತರಹೇವಾರಿ ಪುಷ್ಪ ಹಾಗೂ ಹಣ್ಣು ಹಂಪಲದ ಗಿಡಗಳನ್ನು ನೆಟ್ಟಿರುವ ವಿದ್ಯಾರ್ಥಿಗಳು ಜೇನು ಸಾಕಾಣಿಕೆಯನ್ನೂ ಕಲಿತಿದ್ದಾರೆ. ಸಾವಯವ ಕೃಷಿ ಪದ್ಧತಿಯಡಿ ಈ ಭಾಗದ ಗಡ್ಡೆ ಗೆಣಸು ಹಾಗೂ ಅನೇಕ ಔಷಧೀಯ ಸಸ್ಯಗಳನ್ನು ಬೆಳೆದಿದ್ದಾರೆ. ಪ್ರತಿ ವರ್ಷ ಮಾವು ಮತ್ತು ಹಲಸಿನ ಹಬ್ಬ ಆಚರಿಸಲಾಗುತ್ತದೆ. ಪ್ರತಿ ರಾಷ್ಟ್ರೀಯ ಹಬ್ಬಗಳನ್ನು ಇಲ್ಲಿ ಕಡ್ಡಾಯವಾಗಿ ಶಿಸ್ತುಬದ್ಧವಾಗಿ ಆಚರಿಸಲಾಗುತ್ತದೆ. ಪಾಠದ ಜತೆಗೆ ಕೃಷಿ ಶಿಕ್ಷಣ ಇಲ್ಲಿನ ವಿಶೇಷತೆಗಳಲ್ಲೊಂದು. ಗಿಡ ನೆಡುವ, ಕಳೆ ಕೀಳುವ ಹವ್ಯಾಸ ಇಲ್ಲಿನ ಮಕ್ಕಳ ದಿನಚರಿಯಾಗಿದೆ.ನಲಿ ಕಲಿ ಇಲ್ಲಿ ಸಾರ್ಥಕತೆ ಕಂಡಿದೆ. ಎಲ್ಲದಕ್ಕೂ ಸರಕಾರಿ ಅನುದಾನ ನೆಚ್ಚಿಕೊಳ್ಳದೇ ಹಳೇ ವಿದ್ಯಾರ್ಥಿಗಳು ಹಾಗೂ ಪೋಷಕರ ಸಹಾಯದಿಂದ ತಾಲೂಕಿನಲ್ಲೇ ಮಾದರಿ ಶಾಲೆಯನ್ನಾಗಿಸಿದ್ದು ಇಲ್ಲಿನ ಶಿಕ್ಷಕರ ಸಾಮಥ್ರ್ಯಕ್ಕೆ ಹಿಡಿದ ಕೈಗನ್ನಡಿ.

ಬಿಸಿಯೂಟಕ್ಕೆ ಅಗತ್ಯ ತರಕಾರಿ ಶಾಲೆ ಆವರಣದಲ್ಲೇ ಲಭ್ಯ. ಸುಸಜ್ಜಿತ ಗ್ರಂಥಾಲಯ, ವಿಶಾಲ ಆಟದ ಮೈದಾನ, ಶೌಚಾಲಯ, ಬಿಸಿಯೂಟ ಕೊಠಡಿ ಈ ಶಾಲೆಯ ವಿಶೇಷತೆ. 2014-15ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ಮಂಡಳಿಯಿಂದ ಪರಿಸರ ಮಿತ್ರ ಹಸಿರು ಶಾಲೆ ಪ್ರಶಸ್ತಿ ಕೂಡ ಸಿಕ್ಕಿದೆ.ಇವರ ಈ ಪ್ರತಿಭೆ ಹಾಗೂ ಸಾಮಥ್ರ್ಯದ ಹಿಂದಿರುವ ವ್ಯಕ್ತಿ ಅಥವಾ ಶಕ್ತಿ ಎಂದರೆ ಮುಖ್ಯ ಶಿಕ್ಷಕ ಲೀಲಾಧರ ಮೊಗೇರ.ಇವರಿಗೆ ಉಳಿದ ಶಿಕ್ಷಕರು ಹಾಗೂ ಕ್ರಿಯಾಶೀಲ ಎಸ್‍ಡಿಎಂಸಿ ಸಾಥ್ ನೀಡುತ್ತಿದ್ದು ದಿನೇ ದಿನೆ ಸಾಧನೆಯ ಮೆರಗು ಹೆಚ್ಚುತ್ತಿದೆ. ಸದ್ಯ 14 ವಿದ್ಯಾರ್ಥಿಗಳಿದ್ದು ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಈ ಶಾಲೆ ಮಕ್ಕಳುವಿಜಯಪತಾಕೆ ಹಾರಿಸಿದ್ದಾರೆ. ಈ ಶಾಲೆಯಲ್ಲಿ ಓದಿದ ಜಯಾನಂದ ಡೇರೇಕರ್ ಮೈಸೂರು ವಿವಿಯಿಂದ ಪಿಎಚ್‍ಡಿ ಮುಗಿಸಿದ್ದು ತಾವು ಕಲಿತ ಶಾಲೆಯ ಏಳ್ಗೆಗೆ ಶ್ರಮಿಸುತ್ತಿದ್ದಾರೆ.

ಪ್ರತಿಭೆಯ ಖಣಿ

 1957ರಿಂದ 1983ರವೆರೆಗ ಮರಾಠಿ ಮಾಧ್ಯಮವಿದ್ದ ಈ ಶಾಲೆ 1984ರಲ್ಲಿ ಕನ್ನಡ ಮಾಧ್ಯಮಕ್ಕೆ ಪರಿವರ್ತಿತಗೊಂಡಿದೆ. 61 ವಸಂತ ಪೂರೈಸಿರುವ ಈ ಶಾಲೆ ಇಂದಿಗೂ ಸುತ್ತಲಿನ 10ಕ್ಕೂ ಹೆಚ್ಚು ಗ್ರಾಮಗಳಿಗೆ ಜ್ಞಾನದೇಗುಲ. ಇಲ್ಲಿ ಕಲಿತ ಅನೇಕ ಪ್ರತಿಭಾವಂತರು ಇಂದು ಉನ್ನತ ಸ್ಥಾನದಲ್ಲಿದ್ದಾರೆ.

  ಕೋಟ್...

ಮಕ್ಕಳಿಗೆ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದ ಪರಿಚಯಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸುವ ಚಿಂತನೆಯಿದ್ದು ಶಿಕ್ಷಣ ಪ್ರೇಮಿಗಳ ನೆರವಿನ ನಿರೀಕ್ಷೆಯಲ್ಲಿದ್ದೇವೆ. ಮಕ್ಕಳಿಗೆ ನೆಲಜಲ ಸಂಸ್ಕøತಿ ಇಲ್ಲದಿದ್ದರೆ ಶಿಕ್ಷಣ ಅಪೂರ್ಣ.

-ಲೀಲಾಧರ ಮೊಗೇರ, ಮುಖ್ಯ ಶಿಕ್ಷಕ.