ಭತ್ತದ ಕೃಷಿ ವನಸಿರಿಯ ಖುಷಿ
ಧೋ ಧೋ ಸುರಿವ ಮಳೆ….. ಎಲ್ಲೆಲ್ಲೂ ಹಚ್ಚ ಹಸಿರು… ದಾರಿಯ ಇಕ್ಕೆಲಗಳಲ್ಲಿ ಹಸಿರುಹೊದ್ದ ಪರ್ವತ ಶ್ರೇಣಿ. ಅಲ್ಲಲ್ಲಿ ಕಾಣುವ ಭತ್ತದ ಗದ್ದೆಗಳು. ಮಳೆ ಮಧ್ಯೆಯೇ ಭತ್ತ ನಾಟಿ ಮಾಡುವ ಜನರು…. ಇದು ಯಾವುದೋ ಅಪ್ಟಟ ಮಲೆನಾಡಿನ ಪ್ರದೇಶದ ವರ್ಣನೆಯಲ್ಲ. ಪಶ್ಚಿಮಘಟ್ಟದ ಸೆರಗಿನಲ್ಲಿ ಬರುವ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಡೇರಿಯಾ ಗ್ರಾಮದ ವನಸಿರಿಯ ವರ್ಣನೆ.
ನಿಸರ್ಗ ಸೌಂದರ್ಯದ ಎರಕ ಹೊಯ್ದಂತಿರುವ ಈ ಗ್ರಾಮಕ್ಕೆ ಹೊರಟರೆ ಸಾಕು ಕೆನೆಗಟ್ಟಿದ ಮಂಜಿನ ಪರಿಸರ ಕೈ ಬೀಸಿ ಕರೆಯುತ್ತದೆ. ಸಮೃದ್ಧ ನೆಲ ಜಲದ ಈ ನಾಡು ಭತ್ತದ ಕಣಜ. ಭತ್ತದ ಗದ್ದೆಗಳ ಹಸಿರು ನಮ್ಮ ಉಸಿರನ್ನೇ ಆವರಿಸಿಕೊಂಡುಬಿಡುತ್ತವೆ. ಮಂದವಾದ ಮಳೆ ಮೋಡಗಳು ಎಂಥವರ ಮನದಲ್ಲೂ ಭಾವನೆಗಳನ್ನು ತೂರಿಸಿ ಜೀವರಸವನ್ನು ಸ್ಫುರಿಸುತ್ತವೆ. ದಾರಿ ಮಧ್ಯೆ ಹಸಿರೆಲೆಗಳು ಮುಖಕ್ಕೆ ಮುತ್ತಿಕ್ಕುತ್ತವೆ. ಮೈ ಮನಸ್ಸು ಪ್ರಕೃತಿಯ ಈ ಸಿರಿ ನೋಡಿ ಕುಣಿದು ಭೂದೇವಿಗೆ ನಮಿಸುತ್ತದೆ. ಮಳೆ ಹನಿಯ ಆಹ್ಲಾದಕರ ಸಿಂಚನ ಭೂಸ್ವರ್ಗದ ಅನುಭವ ಕೊಡುತ್ತದೆ. ಮಳೆಯಲ್ಲಿ ಮರೆಯಾಗಿರುವ ಪ್ರಾಣಿಗಳು ಆಗಾಗ ಧ್ವನಿ ಹೊರಡಿಸಿ ತಮ್ಮ ಅಸ್ತಿತ್ವವನ್ನು ಸದ್ದಿಲ್ಲದೇ ಸಾರುತ್ತವೆ. ದಟ್ಟವಾದ ಕಾಡಿನ ಮಧ್ಯೆ ಗಗನವನ್ನು ಚುಂಬಿಸಲು ಹೊರಟ ತೇರಾಳಿ ಗುಡ್ಡ ನೋಡುತ್ತಿದ್ದಂತೆಯೇ ಎಂಥವರೂ ಪ್ರಕೃತಿಯ ಮಡಿಲಲ್ಲಿ ಮಿಂದೇಳುತ್ತಾರೆ. ಹೊಸಬರಿಗೆ ಆರಂಭದಲ್ಲಿ ಭಯ ಎನಿಸಿದರೂ ಸಾಗುತ್ತಾ ಸಾಗುತ್ತಾ ಖುಷಿ ನೀಡುತ್ತದೆ.ನಿಸರ್ಗ ಮಾತೆ ಇಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದಾಳೆ. ಇಲ್ಲಿನ ಸೌಂದರ್ಯಾನುಭುತಿಯ ವರ್ಣನೆ ಕಲ್ಪನಾತೀತ. ಇಲಿನ ನಿಸರ್ಗ ಭಂಡಾರ ಅಪಾರ. ಉತ್ಸಾಹಿ ಮತ್ತು ಸಾಹಸಮಯ ಮನಸ್ಸಿದ್ದವರು ಇಲ್ಲೊಮ್ಮೆ ಭೇಟಿ ನೀಡಲೇಬೇಕು. ಯಾಂತ್ರಿಕ ಬದುಕಿನ ಒತ್ತಡದ ಜೀವನದಿಂದ ಮುಕ್ತಿ ಬೇಕೆಂದರೆ ಇಲ್ಲಿಗೆ ಬಂದರೆ ಸಾಕು. ನಿಸರ್ಗದ ಸವಿಯೂಟ ಎಲ್ಲರಲ್ಲೂ ಹೊಸ ಚೈತನ್ಯ ತುಂಬುವುದು ಖಚಿತ. ಭತ್ತದ ಗದ್ದೆಗಳ ಪಕ್ಕದ ಬೆಟ್ಟದ ಮೇಲಿಂದ ಹಾಲಿನ ನೊರೆಯಂತೆ ಝುಳುಝುಳು ಎನ್ನುವ ಝರಿ ಮೈಗೆ ಸಿಂಪರಣೆಯಾದಾಗ ಸಿಗುವ ಸುಖ ವರ್ಣನಾತೀತ.
ಆಧುನಿಕತೆಯ ಸೋಂಕಿಲ್ಲದೇ ನಿಜವಾದ ಗ್ರಾಮೀಣ ಬದುಕಿನ ಈ ಡೇರಿಯಾ ಹಾಗೂ ಸುತ್ತಲಿನ ಗ್ರಾಮಗಳು ಇಂದಿಗೂ ಪಾರಂಪರಿಕ ಜೀವನಶೈಲಿ ಜತೆಗೆ ಪರಿಸರಸ್ನೇಹಿ ಬದುಕಿನ ಮಹತ್ವವನ್ನು ಸಾರಿ ಹೇಳುತ್ತಿವೆ. ಕಾಡಿನ ನಡುವೆ ಕಾಲುದಾರಿಯಲ್ಲಿ ನಿತ್ಯ ಪಯಣ ಇಲ್ಲಿನ ಜನರಿಗೆ ಹೊಸತೇನಲ್ಲ. ಇದುವೇ ಇವರ ಅಸ್ಮಿತೆ. ನಿಸರ್ಗ ಸೌಂದರ್ಯದ ವಿಚಾರದಲ್ಲಿ ಪ್ರತಿ ಹಳ್ಳಿ ಮಧ್ಯೆಯೂ ಪೈಪೋಟಿಯಿದ್ದಂತಿದೆ. ಮೂಡಿಯಾ, ಕಾಟರೊಳಿ, ಡಿಗ್ಗಿ, ಮಾಯಿರೆ, ಬೊಂಡೇಲಿ, ಪಾಡಶೇತ್ ಹೀಗೆ ಒಂದೇ ಎರಡೇ ಎಲ್ಲವೂ ನಿಸರ್ಗದ ಖಣಿಗಳೇ. ನಗರಜೀವನದಿಂದ ಬೇಸರಗೊಂಡು ಹಸಿರು ನೆಮ್ಮದಿ ಅರಸಿ ಇತ್ತ ಬಂದರೆ ಡೇರಿಯಾದ ಡೇರೇಕರ್ ಕುಟುಂಬದವರ ಆತ್ಮೀಯ ಆದರಾತಿಥ್ಯಕ್ಕೆ ಮನಸೋಲದವರಿಲ್ಲ. ಕಷಾಯ, ಕೇಸುಗಡ್ಡೆ ಪಲ್ಯೆ, ಗಡ್ಡೆ ಗೆಣಸುಗಳ ಕಡಿ (ಸಾಂಬಾರು) ಉಂಡವರಿಗೆ ಗೊತ್ತು ಅದರ ಸವಿ. ಪರಿಸರಪಾಠ, ನೆಲಮೂಲದ ಜ್ಞಾನವನ್ನು ಅಚ್ಚುಕಟ್ಟಾಗಿ ಕಲಿತ ಈ ಗ್ರಾಮದ ಜನರು ಕಾಡಿನ ನಿತ್ಯ ಒಡನಾಡಿಗಳು. ಹಸಿರು ಚೆಪ್ಪರದ ಕೆಳಗೆ ಇರುವ ಡೇರಿಯಾದ ಹುಲ್ಲಿನ ಗುಡಿಸಲುಗಳು ನೀಡುವ ಆನಂದ ಅಪರಿಮಿತ. ಇಲ್ಲಿನ ನಿಸರ್ಗದ ವಿಸ್ಮಯ ಇಲ್ಲಿ ಬಂದ ಪ್ರತಿಯೊಬ್ಬರಲ್ಲಿ ನವಚೈತನ್ಯ ಮೂಡಿಸುವುದಂತೂ ಸತ್ಯ. ಕಾಡುಪ್ರಿಯರಿಗೆ ಈ ಸ್ಥಳ ಹೇಳಿ ಮಾಡಿಸಿದ ತಾಣ