ಪ್ರೀತಿ ಮಧುರ ಅನುಭೂತಿ
-ಪ್ರಸನ್ನ ಕರ್ಪೂರ
ಪ್ರೀತಿ ಪಡೆದವರಿಗೆ ಮಧುರ ಅನುಭೂತಿ. ಹೌದು ಪ್ರೀತಿ ಅಂದ್ರೇನೆ ಹಾಗೆ. ಎಲ್ಲಿ ಯಾವಾಗ ,ಹೇಗೆ ಅಂಕುರವಾಗುತ್ತೆ ಎಲ್ಲಿಗೆ ಹೋಗಿ ಮುಟ್ಟಿಸುತ್ತದೆ ಎಲ್ಲವೂ ನಿಗೂಢ. ಅದೊಂದು ಅಮೂರ್ತ ಪರಿಕಲ್ಪನೆ. ಊಹೆಗೂ ನಿಲುಕದ ಸಾಧನೆಯೂ ಹೌದು ವೇದನೆಯೂ ಹೌದು. ಅದರ ಸೆಳೆತಕ್ಕೆ ಸಿಕ್ಕು ದಡ ಸೇರಿದವರು ಹಲವರಿದ್ದರೆ ಗುರಿ ಮುಟ್ಟಲಾಗದೇ ದೇವದಾಸರಾದವರು ಅನೇಕರು. ಕೆಲವರಿಗೆ ಇದು ವರವಾದರೆ ಹಲವರಿಗೆ ಇದು ಹೋರಾಟದ ಹಾದಿಯನ್ನು ತೋರಿಸಿದೆ. ಪ್ರೀತಿಯ ಪಯಣದಲ್ಲಿ ಪಯಣಿಗರು ಹಲವರು.
ಈ ಮಧ್ಯೆ ಪ್ರೇಮಲೋಕಕ್ಕೆ ಎಂಟ್ರಿ ಆಗುತ್ತಿದ್ದಂತೆ ಎಲ್ಲವೂ ಸುಂದರ ಎನಿಸುತ್ತದೆ. ಪಾರಿಜಾತಗಳು ಅಲ್ಲಿ ಅರಳುತ್ತವೆ. ಮನಸುಗಳು ಮಿಲನಕ್ಕೆ ಹಾತೊರೆಯುತ್ತವೆ. ಹೊಸ ಹೊಸ ಕನಸುಗಳು ಮೊಳಕೆಯೊಡೆಯುತ್ತವೆ, ಬಯಕೆಗಳು ಹುಟ್ಟುತ್ತವೆ. ಮನಸ್ಸು ಎಂಬ ಸಾಗರದಲ್ಲಿ ಅದೇನೋ ವಿಚಿತ್ರ ಅಲೆ ಏಳುತ್ತದೆ. ಅದರ ಸುನಾಮಿಗೆ ಸೋಲದವರಿಲ್ಲಘಿ. ಪ್ರೇಮ ಜ್ವರ ಬಂದವರ ಮನಸ್ಸು ನಿವೇದನೆಗಾಗಿ ಮನಸ್ಸು ಹಾತೊರೆಯುತ್ತದೆ. ಸಂಗಾತಿಯ ಚಿತ್ರ ಮನದೊಳಗೆ ಅಚ್ಚಳಿಯದ ಹಾಗೆ ಮನೆ ಮಾಡಿರುತ್ತದೆ. ಕುಳಿತರೂ ನೀನೆ ನಿಂತರೂ ನೀನೆ ಎನ್ನುವ ಜಪ ಶುರುವಾಗುತ್ತದೆ.ನೀನೇ ..ನೀನೆ ನಗೆಲ್ಲಾ ನೀನೆ... ಮನ, ಮನೆ ತುಂಬಲು ಬಾ ಎನ್ನುವ ಒಲವಿನ ಕರೆಯೋಲೆ, ಪ್ರೀತಿಯ ಹಣತಿಯಲ್ಲಿ ನೀನು ಜ್ಯೋತಿ ನಾನು ಅದಕ್ಕೆ ಎಣ್ಣೆಯಾಗುವೆ ಇಬ್ಬರೂ ಸೇರಿ ಬಾಳು ಬೆಳಗೋಣ, ಒಲಿದಾಗ ಪದಗಳುನಾಚಿದ್ದು ನಿನ್ನಿಂದಲೇ, ನಡೆವಾಗ ತಂಗಾಳಿ ನಿಂತಿದ್ದು ನಿನ್ನಿಂದಲೇ, ನಕ್ಕಾಗ ಬೆಳದಿಂಗಳು ನಾಚಿತು ನಿನ್ನಿಂದಲೇ, ಬಿಸಿ ಸ್ಪರ್ಶಕ್ಕೆ ಇಬ್ಬನಿ ಕರಗಿತು ನಿನ್ನಿಂದಲೇ ಎನ್ನುವ ವರ್ಣರಂಜಿತ ಪದಗಳು ಪುಂಖಾನುಪುಂಖವಾಗಿ ಹೊರಬರುತ್ತವೆ.ಹಗಲುಗನಸು ಇರುಳು ಕನಸುಗಳಲ್ಲಿಯೂ ಸಂಗಾತಿಯದೇ ನೆನಪು. ಪ್ರೀತಿ, ಪ್ರೇಮದ ಆರಂಭಿಕ ದಿನಗಳಂತೂ ಅತಿ ಮಧುರ. ಚಡಪಡಿಕೆ, ಕನವರಿಕೆ ಜೀವನದ ಅವಿಭಾಜ್ಯ ಅಂಗವಾಗಿ ಬಿಡುತ್ತವೆ. ಹರೆಯ ಉಕ್ಕಿ ಹರಿಯುವಾಗ ಮನದೆನ್ನೆಯ ಮದ ಏರಿದಾಗ ಆಗುವ ಅನುಭವವೇ ಬೇರೆ. ಇಬ್ಬರ ಮನಸ್ಸು ಒಂದಾದಾಗ ಸ್ವರ್ಗ ಇನ್ನೇನು ಮೂರೇ ಗೇಣು ಎನ್ನುವ ಹಾಗಿರುತ್ತದೆ.ಈ ಮಧ್ಯೆ ಕೊಂಚ ಮುನಿಸು, ಹಾಸ್ಯ, ತುಂಟತನ ಎಲ್ಲವೂ ಮೇಳೈಸಿದಾಗ ಅದರ ಮಜವೇ ಬೇರೆ. ಅನುಭವಿಸಿದವನಿಗೇ ಗೊತ್ತು ಅದರ ಸವಿ. ಹೃದಯಗಳ ಪಿಸು ಮಾತು ಕೇಳುವ ಸಹೃದಯ ಮನಸುಗಳು ಇದ್ದಾಗ ಪ್ರೀತಿ ಅಮರವಾಗುತ್ತದೆ.ಮನಸ್ಸಿನ ಭಾವನೆಗಳಿಗೆ ಬೆಲೆ ಬರುವುದೇ ಬಯಕೆಯ ಬೇಲಿ ದಾಟಿ ಪ್ರೀತಿ ಪಡೆದಾಗ.
ಕೆಲವರು ಎಲ್ಲೋ ಒಂದೆಡೆ ಕೂಡಿದಾಗ ಪರಸ್ಪರ ಗಮನ ಸೆಳೆದು ಪ್ರೇಮ ಪಾಶಕ್ಕೆ ಸಿಲುಕಿದರೆ ಇನ್ನು ಹಲವರು ಮದುವೆ ನಂತರ ಹೆಂಡತಿಯನ್ನು ಪ್ರೀತಿಸಲು ಆರಂಭಿಸುತ್ತಾರೆ. ಮೊದ
ಲನೇಯದ್ದು ಎಲ್‌ಬಿಡಬ್ಲು ಅಂದರೆ love before wedding ಆದರೆ ಎರಡನೇಯದ್ದು ಅಧಿಕೃತ ಪರವಾನಗಿ ಸಿಕ್ಕ ನಂತರ ಶುರುವಾದ ಪಯಣ. ಎರಡೂ ಮಾದರಿಯಲ್ಲಿ ಅದರ ಅಮಲು ಮಾತ್ರ ಅಗಾಧ. ವಿರಹದ ನೋವು ನಂತರ ಒಂದಾಗುವ ಸವಿಗಳಿಗೆಗೆ ಸಾಕ್ಷಿಯಾದ ಯುವಜೋಡಿಗಳು ಮೈ ,ಮನಸ್ಸು ಹಗುರಾಯಿತು ಎಂದುಕೊಂಡು ಸಂಭ್ರಮಿಸುತ್ತಾರೆ. ರೋಮಾಂಚನದ ಆಲಿಂಗನ ಅಲ್ಲಿರುತ್ತದೆ. ಒಲಿದ ಜೀವ ಜತೆಗೆ ಇರಲು ಬಾಳು ಸುಂದರ ಎನ್ನುವ ಜೋಡಿ ಪರಸ್ಪರ ಪ್ರಶಂಸೆಯ ಸುರಿಮಳೆಯನ್ನೇ ಸುರಿಸುತ್ತಾರೆ. ಸಂಗಾತಿಯ ನೋಟ, ಮೈ ಮಾಟ, ತುಟಿಯಂಚಿನ ತುಂಟ ನಗೆ ಎಲ್ಲವೂ ಅಬ್ಬರಿಸಲು ಆರಂಭಿಸುತ್ತವೆ. ಯುಗ ಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ ಎನ್ನುವ ಹಾಡಿನ ಸಾಲುಗಳು ತನಗರಿವಿಲ್ಲದೆಯೇ ಬಾಯಲ್ಲಿ ಬರಲಾರಂಭಿಸುತ್ತವೆ. ಈಗೆಲ್ಲಾ ವಾಟ್ಸ್‌ಆ್ಯಪ್, ಮೆಸೆಂಜರ್‌ಗಳಿವೆ ಆದರೆ ಹಿಂದಿನ ದಿನಗಳಲ್ಲಿ ಆದರೆ ಪ್ರೇಮಪತ್ರಗಳದ್ದೇ ಪಾರುಪತ್ಯ.ಆಗ ಅದರಲ್ಲಿ ಕೈಚಳಕದ ಗತ್ಯತೆಯಿತ್ತು. ಪದಗಳ ಜ್ಞಾನದ ಅವಶ್ಯಕತೆ ಇತ್ತು. ಆದರೆ ಈಗ ಎಲ್ಲವೂ ಕೃತಕ. ಸರ್ಚ್ ಕೊಟ್ಟರೆ ಸಾಕು ಇಡೀ ಪ್ರೇಮಲೋಕದ ಡಿಕ್ಶನರಿಯೇ ಅನಾವರಣಗೊಳ್ಳುತ್ತದೆ. ಜಸ್ಟ್ ಕಾಪಿ ಪೇಸ್ಟ್ ಅಷ್ಟೇ. ಈಗಿನ ಮನಸ್ಥಿತಿ ಮತ್ತು ಪರಿಸ್ಥಿತಿ ಎರಡೂ ಭಿನ್ನ. ಆದರೆ ಅದು ಇಂದಿಗೂ ನೀಡುವ ಅನುಭೂತಿ ಮಾತ್ರ ಮಧುರ ಅತಿ ಮಧುರ.